ದೀಕ್ಷಿತ್, ಕೆ ಎನ್ -
ಭಾರತದ ಪ್ರತಿಭಾವಂತ ಪುರಾತತ್ವಜ್ಞ. ಸಂಸ್ಕøತ ವಿದ್ವಾಂಸ. ಪ್ರಾಕ್ತನಶಾಸ್ತ್ರದ ಅನೇಕ ಶಾಖೆಗಳಲ್ಲಿ ಅನೇಕ ಶಾಖೆಗಳಲ್ಲಿ ಪರಿಣತಿ ಪಡೆದಿದ್ದರು. ಮುಂಬಯಿ ಪ್ರಾಂತ್ಯದ (ಈಗಿನ ಮಹಾರಾಷ್ಟ್ರ) ಶೋಲಾಪುರ ಜಿಲ್ಲೆಯ ಪಂಢರಪುರದಲ್ಲಿ 1889ರ ಅಕ್ಟೋಬರ್ 21ರಂದು ಜನಿಸಿದರು. ಉತ್ತಮಮಟ್ಟದ ಪ್ರೌಢಶಾಲಾ ಶಿಕ್ಷಣ ಪಡೆದ ಮೇಲೆ ಮುಂಬಯಿ ವಿಶ್ವ ವಿದ್ಯಾಲಯದ ಬಿ.ಎ. (1909) ಮತ್ತು ಎಂ.ಎ. (1911) ಪರೀಕ್ಷೆಗಳಲ್ಲಿ ಪ್ರಶಸ್ತಿ ಸಹಿತ ಪದವಿ ಗಳಿಸಿದರು.

ದೀಕ್ಷಿತರು 1912ರಲ್ಲಿ ಪುರಾತತ್ವ ಇಲಾಖೆಯಲ್ಲಿ ವಿದ್ವಾಂಸರಾಗಿ ಸೇರಿ ಜಾನ್ ಮಾರ್ಷಲ್, ಡಿ. ಆರ್. ಭಂಡಾರ್‍ಕರ್, ಡಿ. ಬಿ. ಸ್ಪೂನರ್ ಮುಂತಾದ ವಿದ್ವಾಂಸರ ಮಾರ್ಗದರ್ಶನದಲ್ಲಿ ತರಬೇತು ಪಡೆದರು. ಅನಂತರ ಸ್ವಲ್ಪ ಕಾಲ ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯದಲ್ಲಿ ಅಸಿಸ್ಟೆಂಟ್ ಕ್ಯುರೇಟರ್ ಮತ್ತು ಲಖನೌದ ಪ್ರಾಂತೀಯ ವಸ್ತುಸಂಗ್ರಹಾಲಯದಲ್ಲಿ ಕ್ಯುರೇಟರ್ ಆಗಿದ್ದರು. 1918ರಲ್ಲಿ ಇವರು ಭಾರತದ ಪುರಾತತ್ವ ಸರ್ವೇಕ್ಷಣೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಪಶ್ಚಿಮ ಮತ್ತು ಪೂರ್ವವಲಯಗಳಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1923-25ರಲ್ಲಿ ನಡೆಸಿದ ಮೊಹೆಂಜೊದಾರೊ ಉತ್ಖನನಗಳಲ್ಲಿ ದೀಕ್ಷಿತರು ಪ್ರಧಾನಪಾತ್ರ ವಹಿಸಿದ್ದರು. ಅನಂತರ ಷಹರ್‍ಪುರ (ಉತ್ತರ ಬಂಗಾಲ), ರಾಮಗಢ (ಉತ್ತರ ಪ್ರದೇಶ) ಮುಂತಾದೆಡೆಗಳಲ್ಲಿ ಭೂ ಅಗೆತ ಮಾಡಿದರು. 1930ರಲ್ಲಿ ದೀಕ್ಷಿತರು ಪುರಾತತ್ವ ಸರ್ವೇಕ್ಷಣೆಯ ಡೆಪ್ಯುಟಿ ಡೈರೆಕ್ಟರ್ ಆಗಿ ನೇಮಕವಾದರು. 1932ರಲ್ಲಿ ಭಾರತ ಸರ್ಕಾರದ ಶಾಸನತಜ್ಞರಾಗಿ ಸ್ವಲ್ಪ ಕಾಲ ಆ ಅಧಿಕಾರದಲ್ಲಿದ್ದರು. 1933ರಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಪ್ರವಾಸ ಕೈಗೊಂಡು ಖ್ಯಾತ ಪುರಾತತ್ವ ಪಂಡಿತರೊಡನೆ ಸಮಾಲೋಚನೆ ನಡೆಸಿ ಪುರಾತತ್ವಗಳಲ್ಲಿ ವಿಶೇಷ ಪಾಂಡಿತ್ಯಗಳಿಸಿ ಹಿಂದಿರುಗಿದ ದೀಕ್ಷಿತರಿಗೆ 1937ರಲ್ಲಿ ಭಾರತ ಸರ್ಕಾರದ ಪುರಾತತ್ವ ಇಲಾಖೆಯ ನಿರ್ದೇಶಕರ ಹುದ್ದೆ ದೊರಕಿತು. ಇವರು 1944ರವರೆಗೂ ಆ ಹುದ್ದೆಯಲ್ಲಿದ್ದರು. ದೀಕ್ಷಿತರು 1943ರಲ್ಲಿ ನಡೆದ ಅಖಿಲ ಭಾರತ ಇತಿಹಾಸ ಸಮ್ಮೇಳನದ ಅಧ್ಯಕ್ಷರೂ 1938, 1939 ಮತ್ತು 1946ರಲ್ಲಿ ಭಾರತದ ನಾಣ್ಯಶಾಸ್ತ್ರ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು.

ಪುರಾತತ್ವ ಮತ್ತು ತತ್ಸಂಬಂಧವಾದ ಅನೇಕ ವಿಷಯಗಳನ್ನು ಕುರಿತು ದೀಕ್ಷಿತರು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಎಪಿಗ್ರಾಫಿಯ ಇಂಡಿಕಾ, ಪುರಾತತ್ವ ಸರ್ವೇಕ್ಷಣೆಯ ವಾರ್ಷಿಕ ವರದಿ, ಇಂಡಿಯನ್ ಆಂಟಿಕ್ವರಿ ಮುಂತಾದ ಪ್ರಖ್ಯಾತ ಸಂಪುಟಗಳಲ್ಲಿ ಇವರ ಲೇಖನಗಳಿವೆ. ಪುರಾತತ್ತ್ವ ಇಲಾಖೆಯಿಂದ ಎರಡು ವಿಶೇಷ ಹೊತ್ತಗೆಗಳನ್ನು (ನಂ. 8 ಮತ್ತು 55) ಇವರು ಪ್ರಕಟಿಸಿದರು. ದೀಕ್ಷಿತರು 1935ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಸರ್ ವಿಲಿಯಂ ಮೆಯರ್ ಉಪನ್ಯಾಸ ಮಾಲೆಯಲ್ಲಿ ಸಿಂಧೂ ಕಣಿವೆ ಸಂಸ್ಕøತಿಯನ್ನು ಕುರಿತು ನೀಡಿದ ಉಪನ್ಯಾಸ ಆ ಸಂಸ್ಕøತಿಯ ಮೇಲೆ ವಿಶೇಷ ಬೆಳಕು ಚೆಲ್ಲುತ್ತದೆ. 1940ರಲ್ಲಿ ಇವರು ಮದ್ರಾಸಿನಲ್ಲಿ ಜರುಗಿದ ಇಪ್ಪತ್ತೇಳನೆಯ ವಿe್ಞÁನಸಮ್ಮೇಳನದಲ್ಲಿ ಮಾನವಶಾಸ್ತ್ರ ವಿಭಾಗದ ಅಧ್ಯಕ್ಷರಾಗಿದ್ದರು. ಇವಲ್ಲದೆ ಎಪಿಗ್ರಾಪಿಯ ಇಂಡಿಕಾದ 21ನೆಯ ಸಂಪುಟವನ್ನು ಇವರು ಸಂಪಾದಿಸಿದರು. ಅದರಲ್ಲಿ ಹರಿವರ್ಮನ ಸಂಗೊಲಿ ತಾಮ್ರಪತ್ರಗಳು, ವಾಕಾಟಕ ರಾಣಿ ಪ್ರತಿಭಾವತಿ ಗುಪ್ಪಳ ಪೂನಾ ತಾಮ್ರಶಾಸನಗಳು, ದಾಮೋದರಪುರದ ಗುಪ್ತಕಾಲೀನ ತಾಮ್ರಪತ್ರಗಳು, ಗಂಜನ ವಾಕಾಟಕ ಶಾಸನ, ಪರಮಾರ ಸೀಯಕನ ಹರಸೊಲಾ ತಾಮ್ರಶಾಸನಗಳು ಮುಂತಾದವನ್ನು ಕುರಿತು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಆ್ಯನ್ ಔಟ್‍ಲೈನ್ ಆಫ್ ಆರ್ಕಿಯಾಲಜಿ ಇನ್ ಇಂಡಿಯ, ದಿ ಪ್ರೋಗ್ರೆಸ್ ಆಫ್ ಆರ್ಕಿಯಾಲಜಿ ಇನ್ ಇಂಡಿಯ ಡ್ಯೂರಿಂಗ್ ದಿ ಪಾಸ್ಟ್ ಟ್ವೆಂಟಿ ಇಯರ್ಸ್, ಪ್ರಿ-ಹಿಸ್ಟಾರಿಕ್ ಸಿವಿಲಿeóÉೀಷನ್ ಆಫ್ ದಿ ಇಂಡಸ್ ವ್ಯಾಲಿ ಮುಂತಾದವು ಇವರ ಗ್ರಂಥಗಳು, ಭಾರತದ ಪುರಾತತ್ವ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಗಣನೀಯವಾದ ಸೇವೆಗಾಗಿ ಬ್ರಿಟಿಷ್ ಸರ್ಕಾರದಿಂದ ಇವರಿಗೆ ರಾವ್‍ಬಹದ್ದೂರ್ ಪ್ರಶಸ್ತಿ ದೊರಕಿತು. ದೀಕ್ಷಿತರು 1946ರ ಆಗಸ್ಟ್ 12ರಂದು ಪುಣೆಯಲ್ಲಿ ಮರಣಹೊಂದಿದರು. 
 (ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ